Saturday, August 29, 2009

ಇದು ಅಮ್ಮನಿಗಾಗಲ್ಲ ಮಗನಿಗಾಗಿ

ಮಕ್ಕಳ ಶಿಶುವಾಗಿದ್ದಾಗ ಜೋಗುಳ ಹಾಡದವರಾರು? ಹಾಡಲು ಬರಲಿ ಬರದಿರಲಿ. ಮಕ್ಕಳಿಗೆ ನಿದ್ರೆ ಬರುವತನಕ ಹಾಡಿದ್ದೇ ಹಾಡಿದ್ದು. ( ಪಾಪದವಕ್ಕೆ ಕಿವಿ ಮುಚ್ಚಿಕೊಳ್ಳಲೂ ಗೊತ್ತಿರುವದಿಲ್ಲವಲ್ಲ)

ಇವೆಲ್ಲ ನಮ್ಮ ಹವ್ಯಕ ಸಂಪ್ರದಾಯದ ಜೋಗುಳಗಳು.

ತಮ್ಮಾ ಸುಮ್ಮಂಗಿರು, ಎಮ್ಮೆ ಮನೆಗೆ ಬಕ್ಕು, ಕಮ್ಮನೆ ಜಾಯಿ ಕುಡಿಲಕ್ಕು
ನಿನ್ನಪ್ಪ ಎಮ್ಮೆಯ ತಕ್ಕು ಎಳೆಗಂದಿ… ಓಳೋಳ್ಳೆ

ಆಡಿ ಬರುವನೆ ಬಾಲ ಗೋಡೆ ಸಾದ್ಯಳುವನೆ, ಕಾಲಿಗೆ ತಾಗಿದವೇ ಎರೆ ಮುಳ್ಳು
ತಮ್ಮಯ್ಯನ ಕೈಗೆ ಸೇರಿದವೇ ಸೆರೆ ಹೊನ್ನು

ಅಳುವ ಮಕ್ಕಳ ತಾಯಿ ಹೊಳೆಯ ನೀರಿಗ್ ಹೋದ
ಅಳಿದಿರಿ ರಾಮ ಲಕ್ಶ್ಮಣಾ ನಿಮ್ಮಬ್ಬೆ ಹೊಳೆ ಮಿಂದು ಗಂಗೆ ತರುವಳ

ಕೂಸಿನ ಮದುವಿಗೆ ಯಾರ್ಯಾರ ದಿಬ್ಬಾಣಾ ಗೂಕರ ಕಪ್ಪೆ ಗುಡುಗುಮ್ಮ ಕಚ್ಚಿಪಾಯಿ
ತಾ ಬಪ್ಪಿ ಎಂಬ ಮದುವಿಗೆ

ಅಳಿದಿರು ಎಂದರೇ ಛಲದಿಂದ ಅಳುವನೇ, ಛಲಗೇಡಿ ನಮ್ಮ ತಮ್ಮಯ್ಯ
ಇವನಿಂದ ಕೆಟ್ಟಿತೂ ಮನೆಯ ಕೆಲಸವೂ

ಮುದ್ದು ನೀ ಅಳದಿರು, ಎದ್ದಾಗ ಹಾಲ್ಕೊಳ್ಳು. ನಿದ್ದೆ ಬಂದರೆ ಪವಡಿಸೂ
ದೇವರು ಬುದ್ದಿ ಕೊಟ್ಟಂದಿಗ್ ಹರದಾಡು

Tuesday, March 10, 2009

ಅನ್ನದಾ ರಸ್ತೆಯಲಿ ನೌಕರಿಗೆ ಹೊರಟಿಹರು ಈರ್ವರು ತರುಳೆಯರು, ಮತ್ತೋರ್ವ ದುರುಳೆ
ದುರುಳೆಯೇ ನಾನು? ಅಲ್ಲಲ್ಲ , ಆದರಂತೂ ಅಲ್ಲ ಸರಳೆ
ಬದುಕಬೇಕಲ್ಲ ಈ ಜನರ ಮಧ್ಯೆ

ತರುಳೆಯರ ಕಣ್ಣಲ್ಲಿ ಕನಸು
ಕೆನ್ನೆಯಲಿ ರಾಗ ರಂಗು
ತುಟಿಗಳಲಿ ಮಂದಹಾಸ
ಯಾವ ರಾಜಕುವರನ ಕನಸೋ

ಸರಳೆಯ ಕಣ್ಣಲ್ಲಿ ನಿದ್ರೆ
ಕೆನ್ನೆಯಲಿ ಸುಕ್ಕು
ತುಟಿಗಳಲಿ ಒಡಕು ಮುಚ್ಚಲು ವ್ಯಾಸಲಿನು
ಕುವರ ಓದುತ್ತಿಲ್ಲ ಯಾಕೋ

ನಮ್ಮಯ ರೋಡಲ್ಲಿ ಹೊರಟಿಹರು
ಈರ್ವರು ತರುಳೆಯರು ಮತ್ತೋರ್ವ ದುರುಳೆ