Monday, May 26, 2008

ಅಮ್ಮ

this is for all our mothers back home.
ದಶರಥನಲ್ಲ ನಾನು
ಸಾಯುವದಿಲ್ಲ, ವಿಲಪಿಸಿ ನಿನ್ನಗಲಿಕೆಯ
ದುಃಖದಿಂದ

ಆದರೂ
ಕಾಣಲಿಲ್ಲವೇ ನಿನಗೆ
ನನ್ನ ಮುಖದ ಸುಕ್ಕುಗಳಲ್ಲಿ
ನಿನ್ನ ಬಿಟ್ಟಿರಲಾರದ ನೋವು

ದಶರಥನಲ್ಲ ನಾನು
ಆದರೂ
ಗಂಡನ ಕೋಪ
ಅತ್ತೆ ಮಾವನ
ದಬ್ಬಾಳಿಕೆ
ನಾದಿನಿಯರ ಕುಹಕ
ವನ್ನೆಲ್ಲ ಒಂದು ನಗುವಿನಲ್ಲಿ
ಮರೆಸುತ್ತಿದ್ದೆ

ನಿನ್ನ ಲಾಲಿಕೆಯಲ್ಲಿ
ನನ್ನ ವಿಫಲ ಬದುಕಿನ
ಸಾರ್ಥಕ್ಯ ಕಂಡೆ

ಈಗ ನಡುಗುವ ಕಾಲುಗಳಿಗೆ
ನಿನ್ನ ಹೆಗಲಾಸರೆ ಬೇಕಾದಾಗ
ರೋಗ ರುಜಿನಗಳಿಂದ ಸೋತ
ಮನಕ್ಕೆ ನಿನ್ನ ಸಾಂತ್ವನ ಬೇಕಾದಾಗ
ಹೊರಟೆ ನೀನು, ನಿನ್ನ ಕನಸುಗಳನ್ನರಸಿ
ದಶರಥನಲ್ಲ ನಾನು
ಸಾಯಲಾರೆ

ಮಗೂ, ಬಯ್ಯಲಾರೆ ನಿನ್ನ
ತಡೆಯಲೂ ಆರೆ
ನಿನ್ನ ಏಳ್ಗೆಯ ದಾರಿಯಲ್ಲಿ
ಅಡ್ಡಗಾಲಾಗಲಾರೆ
ದಶರಥನಲ್ಲ ನಾನು
ಸಾಯಲಾರೆ

ಬದುಕುವೆ
ನಿನ್ನ ನೆನಪುಗಳ ಊರುಗೋಲೊಂದಿಗೆ
ನಿನ್ನ ಭೆಟ್ಟಿಯ ನಿರೀಕ್ಶೆಯಲ್ಲಿ

Monday, May 12, 2008

ಹರಿಯ ಕರುಣದೊಳಾದ

ಆಕಾಶದ ಫೊಟೊ ಹೊಡೆದು ಇದು ನನ್ನ ಆಕಾಶ ಎಂದರೆ... ಎಂತಹ ಮೂರ್ಖತನ ಎನಿಸುತ್ತದೆ ಅಲ್ಲವೆ? ಹಾಗೆಯೇ ಈ ಮನೆ. ಈ ಧನ ಕನಕ, ಈ ಸಂಸಾರ ಎಲ್ಲವೂ ಅವನ ಸ್ರಷ್ಟಿಯೇ ಅಲ್ಲವೇ? ಈ ಮಾಯಾಜಾಲದಲ್ಲಿ ನಾವು ನನ್ನದು, ನಿನ್ನದು ಎನ್ನುತ್ತ ಕಚ್ಚಾಟ ಮಾಡುತ್ತೇವೆ. ಅವನು ಇದನ್ನೆಲ್ಲ ನೋಡಿ ನಗುತ್ತಿರುತ್ತಾನೆ. ನಾವು ಮಕ್ಕಳಾಟ ನೋಡಿ ನಕ್ಕಂತೆ.

ಹರಿಯ ಕರುಣದೊಳಾದ ಭಾಗ್ಯವನ್ನು ಹರಿ ಸಮರ್ಪಣೆ ಮಾಡಿ ಬದುಕಲು ಕಲಿಯಬೇಕು. ಹೇಗೋ?

ಮಿಂಚು, ಮಂಥನ ಇತ್ಯಾದಿ

ಈ ಟಿವಿಯ ಮಂಥನ ಧಾರಾವಾಹಿ ಮೊದಲು ತುಂಬಾ ಚೆನ್ನಾಗಿ ಮೂಡಿಬಂತು. ಅದರ ಸಂಭಾಷಣೆಗಳು ನಿಜವಾಗಿ ಚಿಂತನಶೀಲವಾಗಿದ್ದವು. ಆದರೆ ಕಡೆ ಕಡೆಗೆ ಬಹಳ ಎಳೆದಂತೆನಿಸಿತು. ನಿಷ್ಕಾರಣವಾಗಿ ಯಾವ ಯಾವುದೋ ಪಾತ್ರಗಳನ್ನು ಸೇರಿಸಿ ಬೋರಿಂಗ್ ಅನಿಸತೊಡಗಿತು. ಒಟ್ಟಿನಲ್ಲಿ ಒಂದು ಒಳ್ಳೆಯ ಧಾರಾವಾಹಿಯಾಗಿತ್ತು. ನಿಜ ಹೇಳಬೇಕೆಂದರೆ ಮನ್ವಂತರಕ್ಕಿಂತಲೂ ಇದೇ ಚೆನ್ನಾಗಿತ್ತು.
ಆದರೆ ಮಿಂಚು ಮಾತ್ರ ಬಹಳ ಕೆಟ್ಟ ಧಾರಾವಾಹಿ. ಅದರ ಪಾತ್ರ ಚಿತ್ರಣ ಎಷ್ಟು ಕಳಪೆಯಂದರೆ - ಶಂಕರ್ ದಾಸ್ ಅಷ್ಟು ದೊಡ್ಡ ಉದ್ದಿಮೆಯನ್ನು ಅಷ್ಟೆಲ್ಲ ವರ್ಷ ನಡೆಸಿಕೊಂಡು ಬಂದವರು. ಅಳಿಯನನ್ನು ಪೂರ್ತಿಯಾಗಿ ನಂಬಿ ಬಿಡುತ್ತಾರೆ. ಸ್ವರೂಪ ರಾಜೀವ ಕೊಲೆಗಾರ ಎಂದು ಸಾರಿಸಾರಿ ಹೇಳಿದರೂ ಮನೆಯಲ್ಲಿ ಯಾರೂ ಅವಳನ್ನು ನಂಬುವದಿಲ್ಲ. ಕಾತ್ಯಾಯನಿಯನ್ನು ಕೊಲೆ ಮಾಡಲು ಮೊಟಿವ್ ಇದ್ದದ್ದು ರಾಜೀವ್ ಗೆ ಮಾತ್ರ ಎನ್ನುವದು ಯಾರಿಗೂ (ಪೊಲೀಸ್ ರಿಗೆ ಕೂಡ ) ಹೊಳೆಯುವದೇ ಇಲ್ಲ.
ಸೀತಾರಾಮ್ ಏನಾಯಿತು ನಿಮಗೆ ? ಯಾಕೆ ಇಂತಾ ಧಾರಾವಾಹಿಯನ್ನು ತಯಾರಿಸಿದಿರಿ ?

Wednesday, May 7, 2008

ಕೆಲವು ಜೋಕ್ಗಳು

ಒಬ್ಬ ಸರ್ದಾರ್ಜಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತ ಇದ್ದ. ಒಂದು ಬಾಳೆಹಣ್ಣಿನ ಸಿಪ್ಪೆ ಇತ್ತು. ಅದರ ಮೇಲೆ ಕಾಲಿಟ್ಟು ಜಾರಿಬಿದ್ದ. ಮರು ದಿನ ಮತ್ತೆ ಅಲ್ಲೆ ಒಂದು ಬಾಳೆ ಹಣ್ಣಿನ ಸಿಪ್ಪೆ ನೋಡಿ ಏನು ಹೇಳಿದ?
ಉತ್ತರ : ಇವತ್ತೂ ಜಾರಿ ಬೀಳಬೇಕಲ್ಲಪ್ಪಾ.
ಮೂರನೇ ದಿನವೂ ಅಲ್ಲೊಂದು ಅಲ್ಲ ಎರಡು ಬಾಳೆಹಣ್ಣಿನ ಸಿಪ್ಪೆ ಇದ್ದವು. ನೋಡಿದ ಸರ್ದಾರ್ಜಿ ಏನು ಹೇಳಿದ ?
ಉತ್ತರ : ಇವತ್ತಂತೂ ಒಪ್ಶನ್ ಸಹ ಇದೆ!!
------------------------------------------------------------------------------------------
ಬಹಳಷ್ಟು ನಾಯಿಗಳು ಬೇಕಾದರೆ ಏನು ಮಾಡಬೇಕು ?
ಒಂದು ಖಾಲಿ ಡಬ್ಬಿಯಲ್ಲಿ ಒಂದು ನಾಯಿಯನ್ನು ಹಾಕಿಡಬೇಕು.
ಹೇಗೆ ಅರ್ಥ ಆಗಲಿಲ್ಲವಾ ? ಎಂಪ್ಟಿ ವೆಸೆಲ್ ಮೇಕ್ಸ್ ಮೋರ್ ನಾಯಿಸ್
-----------------------------------------------------------------------------------------
ಒಬ್ಬ ಸರ್ದಾರ್ಜಿ ಒಂದು ಹುಡುಗಿಯ ಹತ್ತಿರ ಕೇಳಿದ. "ಡಾರ್ಲಿಂಗ್ ನನ್ನ ಮದುವೆ ಆಗ್ತೀಯಾ". ಹುಡುಗಿ ಹೇಳಿದಳು. "ತಮೀಜ್ ಸೇ ಬಾತ್ ಕರ್". ಅವನು ಆಗ ಕೇಳಿದ " ಬೆಹೆನ್ ಜಿ ನನ್ನ ಮದುವೆ ಆಗ್ತೀರಾ"
--------------------------------------------------------------------------------------------

Monday, May 5, 2008

ಕನ್ನಡ ಬರೆಯುವುದು ಹೇಗೆ

ಹೆದರಬೇಡಿ. ನಾನು ನಿಮ್ಮನ್ನು ಅ ಆ ಇ ಈ ಕಲಿಸಲು ಬಿನ್ನೆತ್ತಿಗೆ ಕರೆದುಕೊಂಡು ಹೋಗುತ್ತಿಲ್ಲ. ( ನಿಮಗೆಲ್ಲ ಹೊಸ ಜನರೇಶನ್ನವರಿಗೆ ಬಿನ್ನೆತ್ತಿ ಎಂದರೆ ಗೊತ್ತಿರುವದಿಲ್ಲ. ನಾವು ಮಕ್ಕಳಾಗಿದ್ದಾಗ ಎಲ್ ಕೆ ಜಿ, ಯು ಕೆ ಜಿ , ಒಂದು ಕೆ ಜಿ ಎಲ್ಲಾ ಇರಲಿಲ್ಲ. ನೇರವಾಗಿ ಒಂದನೇ ಕ್ಲಾಸು. ಇನ್ನು ಮನೆಯಲ್ಲಿ ತುಂಬಾ ಗಲಾಟೆ ಮಾಡುವ ಚಿಕ್ಕ ಮಕ್ಕಳನ್ನು ಹೆಸರು ಹಚ್ಚದಿದ್ದರೂ ಶಾಲೆಗೆ ಕಳಿಸುತ್ತಿದ್ದರು. ಅವರೇ ಬಿನ್ನೆತ್ತಿ. (ಬಿನ್ - ವಿತೌಟ್. ಉರ್ದು?) ). ನಾನು ಕನ್ನಡ ಬ್ಲೋಗ್ ಆರಂಭಿಸಲು ಬಹಳ ಕಷ್ಟ ಪಟ್ಟೆ. ಅದಕ್ಕೆ ಈ ಹೆಲ್ಪ್ ಬ್ಲೋಗ್.
ಮೊದಲು ಬರಹ ಸೋಪ್ಟ್ ವೇರನ್ನು http://www.baraha.com/ . ಇಲ್ಲಿಂದ ಡೌನ್ ಲೋಡ್ ಮಾಡಿ. ನಂತರ ಬ್ಲೊಗರ್ ಅಥವಾ ಇನ್ಯಾವುದೊ ಒಂದು ಬ್ಲೊಗನಲ್ಲಿ ಹೊಸ ಪೋಸ್ಟ್ ಬರೆಯುವಾಗ ಬರಹ ಡೈರೆಕ್ಟ್ ಓನ್ ಮಾಡಿ. ನಿಮ್ಮ ಟಾಸ್ಕ್ ಬಾರ್ ನಲ್ಲಿ ಒಂದು ಐಕಾನ್ ಕಾಣುತ್ತದೆ. ಅದರಲ್ಲಿ right click ಮಾಡಿ languages ನಲ್ಲಿ ಕನ್ನಡ ಯುನಿಕೋಡ್ ಸೆಲೆಕ್ಟ್ ಮಾಡಿ. ಅದಾದ ಮೇಲೆ ನೀವು ಏನು ಬೇಕಾದರೂ ಕನ್ನಡದಲ್ಲಿ ಬರಯಬಹುದು. ಎಂಜಾಯ್ !!! (ನಿಜವಾಗಿ ಹೇಳುವದಿದ್ದರೆ ಕನ್ನಡವನ್ನು ಇಂಗ್ಲಿಷ್ ಕೀಬೋರ್ಡ್ ನಲ್ಲಿ ಟೈಪ್ ಮಾಡುವದು ಎನಿತಿಂಗ್ ಬಟ್ ಎಂಜಾಯ್ ಮೆಂಟ್)